
ಕಾರ್ಕಳ: ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮಘಟ್ಟದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ನಾಡ್ಪಲು ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಕಾಡುಪ್ರಾಣಿಗಳ ಹಾವಳಿಯಿಂದ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಾಡ್ಪಾಲು ಹಾಗೂ ಸುತ್ತಮುತ್ತಲಿನ ಹಲವು ತೋಟಗಳಿಗೆ ಆನೆಗಳು ನುಗ್ಗಿ ಕೃಷಿಯನ್ನು ನಾಶಮಾಡಿವೆ. ಕೆಲ ದಿನಗಳ ಹಿಂದೆ ಶೃಂಗೇರಿಯ ಕೆರೆಕಟ್ಟೆ ಪ್ರದೇಶದಲ್ಲಿ ಇಬ್ಬರು ನಾಗರಿಕರು ಆನೆಯ ದಾಳಿಗೆ ಬಲಿಯಾಗಿದ್ದಾರೆ. ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳಿಗೂ ಆನೆಗಳ ಹಾವಳಿಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಲ್ಲದೇ ಹಂದಿಗಳು ಕೃಷಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾನಿಗೊಳಿಸುತ್ತಿದ್ದರೆ, ಮಂಗಗಳು ಕೂಡಾ ಕಾಡಿನಿಂದ ನಾಡಿಗೆ ಬಂದು ರೈತರ ಬೆಳೆ ನಾಶ ಮಾಡುತ್ತಿವೆ. ಈ ಬಗ್ಗೆ ಗ್ರಾಮಸಭೆ, ಜನಸ್ಪಂದನ ಸಭೆ ಹಾಗೂ ಜನಸಂಪರ್ಕ ಸಭೆಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿದರೂ ಅರಣ್ಯ ಇಲಾಖೆ ಮತ್ತು ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.
ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಿ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಈ ಭಾಗದ ಜನರು ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಅರಣ್ಯಾಧಾರಿತ ಮೂಲ ಆದಿವಾಸಿ ಸಂಘಟನೆಗಳ ಕೋರ್ ಕಮಿಟಿ ಸದಸ್ಯರಾದ ಶ್ರೀಧರ ಗೌಡ ಈದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.


The post ಕಾಡುಪ್ರಾಣಿಗಳ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ: ಶ್ರೀಧರ ಗೌಡ ಈದು first appeared on karavalinews.com.


